ಮೊನಾಕೊ
ಫ್ರಾನ್ಸಿನ ಆಗ್ನೇಯದಿಕ್ಕಿನ ಮೆಡಿಟರೇನಿಯನ್ ಸಮುದ್ರ ತೀರದ ಒಂದು ಪುಟ್ಟ ಸ್ವತಂತ್ರ ಸಂವಿಧಾನಬದ್ಧ ಅರಸೊತ್ತಿಗೆ.  ಮೆಡಿಟರೇನಿಯನ್ ತೀರದ ನೀಸ್ ರೇವುಪಟ್ಟಣದ ಪೂರ್ವಕ್ಕೆ ಸು. 24 ಕಿಮೀ ದೂರದಲ್ಲಿದೆ.  ಈ ರಾಜ್ಯದ ದಕ್ಷಿಣದಲ್ಲಿ ಮೆಡಿಟರೇನಿಯನ್ ಸಮುದ್ರ, ಉಳಿದ ಮೂರು ದಿಕ್ಕುಗಳಲ್ಲಿ ಫ್ರಾನ್ಸ್ ದೇಶ ಸುತ್ತುವರಿದಿದೆ.  ವಿಸ್ತೀರ್ಣ 1.81 ಚಕಿಮೀ, ಜನಸಂಖ್ಯೆ 31,700 (1997).   ರಾಜಧಾನಿ ಮೊನಾಕೊ.

ರಾಜ್ಯದಲ್ಲಿ ಮೊನಾಕೊವಿಲೆ, ಲಾ ಕೋಂಡಾಮೀನ್, ಫಾಂಟ್‍ವಿಲೆ ನಗರಪಾಲಿಕೆಗಳು ಒಟ್ಟುಗೂಡಿದಂತಿವೆ.  ಲಾ ಕೋಂಡಾಮೀನ್ ವಾಣಿಜ್ಯಕೇಂದ್ರ, ಫಾಂಟ್‍ವಿಲೆ ಕೈಗಾರಿಕಾಕೇಂದ್ರ.  ಮೆಡಿಟರೇನಿಯನ್ ಹವಾಗುಣವಿದ್ದು ಬೇಸಗೆಯಲ್ಲಿ ಬಿಸಿಲ ತಾಪ ಹೆಚ್ಚಿಲ್ಲ.  ಹಿಮಗಾಲ ಹಿತಕರ, ರಾಜ್ಯದ ಭಾಷೆ ಫ್ರೆಂಚ್, ಇಟಾಲಿಯನ್ ಮತ್ತು ಫ್ರೆಂಚ್ ಭಾಷೆಗಳ ಸಂಮಿಶ್ರಣವಾದ ಮೊನಾಗಸ್ಕ್ ಎಂಬ ಭಾಷೆ ಹಾಗೂ ಇಟಾಲಿಯನ್ ಮತ್ತು ಇಂಗ್ಲಿಷ್ ಸಹ ಬಳಕೆಯಲ್ಲಿವೆ.  ಹೆಚ್ಚು ಜನ ರೋಮನ್ ಕ್ಯಾಥೋಲಿಕ್ ಕ್ರೈಸ್ತಧರ್ಮಕ್ಕೆ ಸೇರಿದವರು.

ಇತಿಹಾಸ : ಮೊನಾಕೊ ಅಸ್ತಿತ್ವ ಮಧ್ಯಯುಗದಿಂದ ಕಂಡುಬಂದಿದೆ.  1297 ರಿಂದ ಈ ರಾಜ್ಯ ಗ್ರಿಮಾಲ್ಡಿ ರಾಜಸಂತತಿಯ ಆಳ್ವಿಕೆಗೆ ಒಳಪಟ್ಟಿತು.  ಫ್ರಾನ್ಸ್ ಕ್ರಾಂತಿಯ ಕಾಲದಲ್ಲಿ (1789 -99) ಈ ರಾಜ್ಯದ ಅಸ್ತಿತ್ವವನ್ನೇ ರದ್ದುಗೊಳಿಸಲಾಗಿತ್ತು.  ಮುಂದೆ 1814 ರಲ್ಲಿ ಪುನಃ ಅಸ್ತಿತ್ವಕ್ಕೆ ಬಂದು ಫ್ರಾನ್ಸಿನ ಒಂದು ಆಶ್ರಿತ ರಾಜ್ಯವಾಯಿತು.  1915 ಮತ್ತು 1919 ರಲ್ಲಿ ಮೊನಾಕೊ ಮತ್ತು ಫ್ರಾನ್ಸ್ ನಡುವೆ ಆದ ಒಪ್ಪಂದದ ಪ್ರಕಾರ, ಮೊನಾಕೊ ಅರಸ ಗಂಡುಸಂತಾನವಿಲ್ಲದೆ ಮೃತನಾದರೆ ಈ ರಾಜ್ಯ ಫ್ರಾನ್ಸ್ ದೇಶಕ್ಕೆ ಸೇರಬೇಕೆಂದಾಗಿದೆ.  1922 ರಿಂದ ಮೊನಾಕೊ ರಾಜನಾಗಿದ್ದ ಎರಡನೆ ಲೂಯಿ ಮೇ 1949 ರಲ್ಲಿ ಮರಣ ಹೊಂದಿದ.  ಅವನ ಮೊಮ್ಮಗ ಮೂರನೆಯ ರಾನೀರ್ ಪಟ್ಟಕ್ಕೆ ಬಂದ.  ಜನವರಿ 1983ರ  ಚುನಾವಣೆಯಲ್ಲಿ ರಾನೀರನಿಗೆ ಬೆಂಬಲನೀಡಿದ ರಾಷ್ಟ್ರೀಯ ಮತ್ತು ಪ್ರಜಾಪ್ರಭುತ್ವ ಪಕ್ಷಗಳು ಒಟ್ಟುಗೂಡಿ ಈ ರಾಜ್ಯದ ಸಂಸತ್ತಿನ (ನ್ಯಾಷನಲ್ ಕೌನ್ಸಿಲ್) ಎಲ್ಲ 18 ಸ್ಥಾನಗಳನ್ನೂ ಗೆದ್ದುಕೊಂಡವು.

ಸಂವಿಧಾನ : ರಾಜ್ಯದ ಸಂವಿಧಾನ ಪ್ರಥಮತಃ 1911 ರಲ್ಲಿ ರಚಿತವಾಗಿ ತರುವಾಯ 1917 ರಲ್ಲಿ ತಿದ್ದುಪಾಟಾಯಿತು.  ಇದರ ಪ್ರಕಾರ 30 ಮಂದಿ ನಗರ ಪಾಲಿಕೆಯ ಪ್ರತಿನಿಧಿಗಳನ್ನು ಹಾಗೂ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾದ 12 ಮಂದಿ ಸದಸ್ಯರನ್ನು ಒಳಗೊಂಡ ಚುನಾವಣಾ ಮಂಡಲಿ ಸಂಸತ್ತನ್ನು (ನ್ಯಾಷನಲ್ ಕೌನ್ಸಿಲ್) ರಚಿಸುತ್ತದೆ.  ಅರಸ ರಾನೀರ್ ಡಿಸೆಂಬರ್ 1962 ರಲ್ಲಿ ಸಂವಿಧಾನಕ್ಕೆ ಹೊಸ ತಿದ್ದುಪಡಿ ತಂದು ಅನುವಂಶಿಕ ಅರಸುತನವನ್ನು ಸ್ಥಿರಗೊಳಿಸಿದರೂ ರಾಜನ ದೈವಸಂಭೂತ ಹಕ್ಕು ರದ್ದಾಯಿತು.  ನ್ಯಾಷನಲ್ ಕೌನ್ಸಿಲ್ ಎಂಬ ಏಕಸದನದ 18 ಮಂದಿ ಚುನಾಯಿತ ಸದಸ್ಯರ ಸಂಸತ್ತು ಇದೆ.  ಶಾಸನ ರಚನೆಯ ಅಧಿಕಾರ ದೇಶದ ಅರಸ ಮತ್ತು ಸಂಸತ್ತಿನಲ್ಲಿ ನೆಲೆಸಿದೆ.  ಸಂಸತ್ತಿನ ಸದಸ್ಯರ ಆಯ್ಕೆ ಸಾರ್ವತ್ರಿಕ ಚುನಾವಣೆಯ ಮೂಲಕ.  ಸದಸ್ಯರ ಅಧಿಕಾರಾವಧಿ 6 ವರ್ಷ.  ಮತದಾನ 21 ವರ್ಷಕ್ಕೆ ಮೇಲ್ಪಟ್ಟು ವಯಸ್ಸಿನ ಪ್ರಜೆಗಳಿಂದ.
ಸರ್ಕಾರ : ರಾಜ ಮತ್ತು ರಾಜನಿಗೆ ಒಪ್ಪಿಗೆಯಾದ ಫ್ರೆಂಚ್ ಸರ್ಕಾರ ಹೆಸರಿಸಿದ ಒಬ್ಬ ಫ್ರೆಂಚ್ ಮಂತ್ರಿ ಹಾಗೂ  4 ಮಂದಿ ಸರ್ಕಾರಿ ಅಧಿಕಾರಿಗಳಿಂದ ಕೂಡಿದ ಆಡಳಿತ ಮಂಡಲಿಯಿದೆ.  ರಾಜನಿಗೆ ವಿದೇಶಗಳೊಡನೆ ವ್ಯವಹರಿಸುವ ಮತ್ತು ಒಪ್ಪಂದಗಳನ್ನು ಮಾಡಿಕೊಳ್ಳುವ ಅಧಿಕಾರವಿದೆ. 

ನ್ಯಾಯಾಡಳಿತ : ಮೊನಾಕೊ ರಾಜ್ಯದ ನ್ಯಾಯಾಡಳಿತ ಫ್ರಾನ್ಸ್ ದೇಶದ ನ್ಯಾಯಾಂಗದ ಮಾದರಿಯದು.  ರಾಜ್ಯದಲ್ಲಿ ಸುಪ್ರೀಮ್ ಟ್ರಿಬ್ಯೂನಲ್ ಎಂಬ ಉಚ್ಚ ನ್ಯಾಯಾಲಯ.  ಅದರ ಅಧಿಕಾರ ವ್ಯಾಪ್ತಿಗೆ ಒಳಪಟ್ಟ ಇತರೇ ನ್ಯಾಯಾಲಯಗಳಿಂದ ಕೂಡಿದೆ.  ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗೀ ಶಾಲೆಗಳಿವೆ.

ಆರ್ಥಿಕತೆ : ರಾಜ್ಯದ ಆದಾಯ ನೇರ ಮತ್ತು ಪರೋಕ್ಷ ತೆರಿಗೆಗಳು ವಿದ್ಯುಚ್ಛಕ್ತಿ, ಕೈಗಾರಿಕೆ ಹಾಗೂ ಪ್ರವಾಸೋದ್ಯಮಗಳಿಂದ ಬರುತ್ತದೆ.  ಬ್ಯಾಂಕ್ ಹಾಗೂ ವಿಮೆ ಯೋಜನೆಗಳು ಸುವ್ಯವಸ್ಥಿತವಾಗಿವೆ.  1958 ರಿಂದ ಭೂಮಿಯನ್ನು ಉಪಯುಕ್ತವಾಗಿ ಬಳಸಿಕೊಳ್ಳುವ ಯೋಜನೆಯ ಪ್ರಕಾರ ಉಪಯೋಗಕ್ಕೆ ತಂದುಕೊಂಡು ಭೂಮಿಯ ಮೇಲೆ ಹೋಟೆಲುಗಳು, ವಸತಿ ಯೋಗ್ಯ ಸಮುಚ್ಛಯ ಕಟ್ಟಡಗಳು ಹಾಗೂ ಅಂಗಡಿಗಳನ್ನು ಕಟ್ಟಲಾಗಿದೆ.  ರಾಜ್ಯದ ಆದಾಯ ಶೇಕಡಾ 40 ಉದ್ಯಮಗಳಿಂದ, ಶೇಕಡಾ 30 ಕಟ್ಟಡಗಳ ಬಾಡಿಗೆಯಿಂದ, ಶೇಕಡಾ 25 ಪ್ರವಾಸೋದ್ಯಮದಿಂದ ಬರುತ್ತದೆ; ಮಾಂಟೆಕಾರ್ಲೊ ಮತ್ತು ಕ್ಯಾಸಿನೋ ಜೂಜಿನ ಸಂಸ್ಥೆಗಳಿಂದ ಶೇಕಡಾ 3.65 ರಷ್ಟು ಆದಾಯವಿದೆ.

ಸಾರಿಗೆ ಮತ್ತು ಸಂಪರ್ಕ : ರಾಜ್ಯದಲ್ಲಿ 46 ಕಿಮೀ ಉದ್ದದಷ್ಟು ರಸ್ತೆ.  ಫ್ರಾನ್ಸಿನ ರೈಲ್ವೆ ಈ ರಾಜ್ಯದ ಸಂಪರ್ಕ ಕಲ್ಪಿಸಿದೆ.  ನೀಸ್ ಇದರ ಸಮೀಪ ವಿಮಾನ ನಿಲ್ದಾಣ.

ಪ್ರವಾಸೋದ್ಯಮ : ಬೇಸಗೆ ಮತ್ತು ಚಳಿಗಾಲದಲ್ಲಿರುವ ಆಹ್ಲಾದಕರವಾದ ಹವಾಗುಣ, ಮಂಟಿಕಾರ್ಲೊದಲ್ಲಿ ದೊರಕುವ ಸೌಲಭ್ಯಗಳು ಹಾಗೂ ಅಲ್ಲಿಯ  ಕ್ಯಾಸಿನೋ ಜೂಜು ಮಂದಿರಗಳ ಆಕರ್ಷಣೆ - ಇವುಗಳಿಂದ ಪ್ರವಾಸೋದ್ಯವ ಉಚ್ಚ್ರಾಯ ಸ್ಥಿತಿಯಲ್ಲಿದೆ.  1983 ರಲ್ಲಿ  ಪ್ರವಾಸಿಗಳಿಗೆ 1,800 ಹೋಟೆಲ್ ಕೊಠಡಿಗಳ ಸೌಲಭ್ಯವಿದ್ದಿತು.  ಇಲ್ಲಿಯ ವಾರ್ಷಿಕ ಮೋಟಾರ್ ರ್ಯಾಲಿ ಬಲುಪ್ರಸಿದ್ಧ.
												(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ